ನಾಟಿ ಹಾಕುವಿಕೆ
	ವ್ಯಕ್ತಿಯ ಒಂದು ಅಂಗವನ್ನೋ ಅಂಗಾಂಶವನ್ನೋ ಅದರ ಸ್ವಾಭಾವಿಕ ನೆಲೆಯಿಂದ ತೆಗೆದು ಅದೇ ವ್ಯಕ್ತಿಯ ಯಾ ಬೇರೆ ವ್ಯಕ್ತಿಯ ಬೇರೆ ಸ್ಥಳದಲ್ಲಿ ಇಲ್ಲವೇ ಬೇರೆ ವ್ಯಕ್ತಿಯ ದೇಹದಲ್ಲಿ ಪ್ರತಿಷ್ಠಾಪಿಸುವಿಕೆ (ಟ್ರಾನ್ಸ್‍ಪ್ಲಾಂಟ್; ಗ್ರಾಫ್ಟ್). ಆದರೆ ಸಾಮಾನ್ಯವಾಗಿ ಅರ್ಥವಿರುವಂತೆ ಪೈರುಗಳನ್ನು ಯಾವ ಕಾರಣಗಳಿಗಾಗಿ  ನಾಟಿ ಹಾಕುತ್ತಾರೋ ಗಿಡಗಳನ್ನು ಯಾವ ಕಾರಣಗಳಿಗಾಗಿ ಕಸಿ ಮಾಡುತ್ತಾರೋ ಆ ಕಾರಣಗಳಿಗಾಗಿ ಅಂಗ ಅಂಗಾಂಶಗಳ ನಾಟಿಯನ್ನು ಕೈಗೊಳ್ಳುವುದಿಲ್ಲ. ಸ್ವರೂಪದ ಪುನವ್ರ್ಯವಸ್ಥೆಗಾಗಿ (ರೀಕನ್‍ಸ್ಟ್ರಕ್ಷನ್ ಆಫ್ ಆರ್ಗನ್ಸ್), ಕ್ರಿಯೆಗೆಟ್ಟ ಅಂಗ ಅಂಗಾಂಶಗಳ ಸಹಾಯಕ್ಕಾಗಿ, ಇಲ್ಲವೆ ಅವನ್ನು ತೆಗೆದು ಅವುಗಳ ಬದಲು ಆರೋಗ್ಯವಂತ ಅಂಗ ಅಂಗಾಂಶಗಳನ್ನು ನೆಲೆಗೊಳಿಸುವುದಕ್ಕಾಗಿ ಇಂಥ ನಾಟಿಯನ್ನು ರೂಢಿಸಲಾಗಿದೆ.

	ಕ್ರಿಸ್ತಪೂರ್ವದಲ್ಲೇ ಭಾರತದ ಆಯುರ್ವೇದಾಚಾರ್ಯರು ಹರಿದ ಮೂಗಿನ ದುರಸ್ತಿಗಾಗಿ ತೋಳಿನ ಚರ್ಮವನ್ನು ಎಬ್ಬಿ ಮೂಗಿಗೆ ತೇಪೆ ಹಾಕಿ ತೋಳನ್ನು ಅದೇ ಭಂಗಿಯಲ್ಲಿ ಎರಡು ವಾರ ಬಂಧಿಸಿಡುತ್ತಿದ್ದರೆಂದೂ ಚರ್ಮ ಕೂಡಿಕೊಂಡ ಬಳಿಕ ತೋಳಿನ ಮೂಲವನ್ನು ಕತ್ತರಿಸಿ ಬೇರ್ಪಡಿಸ್ತುದ್ದರೆಂದೂ ಉಕ್ತವಾಗಿದೆ. ಶಿಕ್ಷಾಕ್ರಮವಾಗಿ ಮೂಗನ್ನು ಕಳೆದುಕೊಂಡ ತಪ್ಪಿತಸ್ಥರ ಮೂಗನ್ನು ಪುನಃ ಸೃಷ್ಟಿಸಲು ಇಟಲಿಯ 16ನೆಯ ಶತಮಾನದ ವೈದ್ಯ ಟ್ಯಾಗ್ಲಿಯಾ ಕೊಜ್ಸಿ ಎಂಬಾತ ಇಂಥದೇ ವಿಧಾನವನ್ನು ಅನುಸರಿಸಿದ್ದು ತಿಳಿದಿದೆ. ಮೈಸುಟ್ಟ ಪ್ರಸಂಗಗಳಲ್ಲಿ ಕಲೆ ಉಳಿಯದಂತೆ ಮಾಡಲು ಅದೇ ವ್ಯಕ್ತಿಯಲ್ಲಿ ಅನ್ಯಸ್ಥಳಗಳಿಂದ ಅನುರೂಪವಾದ ಚರ್ಮದ ಬಲು ತೆಳು ಪದರವನ್ನು ಹೆರೆದು ತೆಗೆದು ಸುಟ್ಟ ಸ್ಥಳದಲ್ಲಿ ನಾಟಿ ಹಾಕುವುದು ಅನೇಕ ದಶಕಗಳಿಂದ ಮಾಮೂಲಾಗಿರುವ ಚಿಕಿತ್ಸಾಕ್ರಮ. ನೇತ್ರದಾನ ಎನ್ನಿಸುವ (ಕಾರ್ನಿಯಲ್ ಗ್ರಾಫ್ಟ್) ಕಣ್ಣಿನ ಗುಡ್ಡೆಯ ಪಾರದರ್ಶಕ ಭಾಗದ ಪ್ರತಿಷ್ಠಾಪನೆಯೂ ಈಚೆಗೆ ಸಾಮಾನ್ಯ ಕ್ರಮವಾಗಿದೆ. ಮೂಳೆ, ಮೃದ್ವಸ್ಥಿ, ಅಭಿಧಮನಿಗಳ ಖಂಡಗಳ ಹಾಗೂ ಗುಂಡಿಗೆಯ ಕವಾಟಗಳ ನಾಟಿಗಳು ವಾಸ್ತವವಾಗಿ ಅಂಗನಾಟಿ ಎನ್ನಿಸಿಕೊಳ್ಳಲಾರವಾದರೂ ಅವು ಅಂಥ ಉದ್ದೇಶಕ್ಕಾಗಿಯೇ ಕೈಗೊಳ್ಳುವ ಯುಕ್ತ ಕ್ರಮಗಳಾಗಿರುವುದಂತೂ ನಿಜ. ಇವುಗಳ ನಾಟಿಯ ಬದಲು ನಿರ್ಜೀವ ಕೃತಕ ಅಂಗಗಳ ಅಳವಡಿಕೆಯನ್ನು ಮಾಡುವುದು ಕೂಡ ಸಾಧ್ಯ. ರಕ್ತಪೂರಣ ಹಾಗೂ ಮಜ್ಜೆನಾಟಿಗಳು (ಬ್ಲಡ್ ಟ್ರಾನ್ಸ್‍ಫ್ಯೂಷನ್ ಮತ್ತು ಟ್ರಾನ್ಸ್‍ಪ್ಲಾಂಟ್) ನಿಶ್ಚಯವಾಗಿಯೂ ಅಂಗಾಂಶ ನಾಟಿಗಳೆಂದೇ ಪರಿಗಣಿಸಬೇಕಾದವು. ಇದೇ ರೀತಿ ಅಂತ್ರವೃದ್ಧಿ (ಹರ್ನಿಯ) ಚಿಕಿತ್ಸೆಗಾಗಿ ಮಾಡುವ ಹರ್ನಿಯರಫಿ ಎಂಬ ಶಸ್ತ್ರಕ್ರಿಯೆಯಲ್ಲಿ ಸ್ನಾಯುವೇಷ್ಟನದ (ಫೇಶಿಯ) ಬಳಕೆಯನ್ನು ಸಹ ಅಂಗಾಂಶನಾಟಿಯೆಂದೇ ಪರಿಗಣಿಸತಕ್ಕದ್ದು. ಮೂತ್ರಪಿಂಡನಾಟಿಯನ್ನು ಅನೇಕ ವೇಳೆ ಜೀವರಕ್ಷಕ ಕ್ರಮವಾಗಿದೆ. (ಆದರೆ ನಾಟಿ ಫಲಯುಕ್ತವಾಗದಿದ್ದರೆ ಇನ್ನೊಂದು ಶಸ್ತ್ರಕ್ರಿಯೆಯನ್ನೇ ಮಾಡಿ ನಾಟಿ ಮಾಡಿದ ಅಂಗವನ್ನು ತೆಗೆದು ಹಾಕಲೇಬೇಕಾಗುತ್ತದೆ). ಇತ್ತೀಚೆಗೆ ವರದಿಯಾಗುತ್ತಿರುವ ಗುಂಡಿಗೆ ನಾಟಿ ಪ್ರಸಂಗಗಳೂ ಬಹುಜನವೇದ್ಯ. 						(ನೋಡಿ- ಕೃತಕ-ಅಂಗಗಳು)	
											(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ